ಮೇಷ ರಾಶಿ: ಈ ವರ್ಷವೂ ನೀವು ಹಲವು ವಿಚಾರಗಳಲ್ಲಿ ಸುದೈವಿಗಳಾಗಿರುವುದಲ್ಲದೇ ಎಲ್ಲಾ ಪ್ರಯತ್ನಗಳಲ್ಲೂ ದೈವಬಲ ಸದಾ ಇರುವುದು. ಬಂಧು–ಮಿತ್ರ–ಅಧಿಕಾರಿ ವರ್ಗಗಳಿಂದ ಸಮಯೋಚಿತ ಸಹಕಾರ ಸದಾ ದೊರೆತು, ಮಾನಸಿಕ ನೆಮ್ಮದಿಯನ್ನು ಹೊಂದುವಿರಿ. ಬಹುಕಾಲದಿಂದ ಒದಗಿ ಬಂದ ಸಮಸ್ಯೆಗಳಿಗೆ ಪರಿಹಾರ ದೊರೆತು ಸಂತೃಪ್ತಿ ಹೊಂದುವಿರಿ. ವಿದ್ಯಾರ್ಥಿಗಳಿಗೆ ನೌಕರಿ ವೃಂದದವರಿಗೆ ಮತ್ತು ಕೃಷಿಕರಿಗೆ ವಿಶೇಷವಾಗಿ ಉತ್ತಮ ಫಲಗಳು ಲಭಿಸುವುದು. ವಿದೇಶ ಪ್ರಯಾಣ ಯೋಗವು ಒದಗಿ ಬಂದಿತು. ಜೂನ್ ಅಂತ್ಯದ ನಂತರ ಆರೋಗ್ಯ ಭಾಗದಲ್ಲಿ ಸ್ವಲ್ಪ ಏರುಪೇರು ಕಾಣಿಸಿಕೊಳ್ಳಬಹುದು. ಆದರೂ ದೈವಾನುಕೂಲದಿಂದ ಉತ್ತಮ ಆರೋಗ್ಯವು ಕೂಡಿ ಬರುವುದಲ್ಲದೇ ವಿವಿಧ ಮೂಲಗಳಿಂದ ಧನ ಪ್ರಾಪ್ತಿ ಯೋಗವಿರುವುದು. ವ್ಯವಹಾರದಲ್ಲಿ ದುಷ್ಟರ ಕಿರುಕುಳದಿಂದ ಸಂತ್ರಾಸಗೊಳ್ಳುವ ಸಂಭವವಿದೆ. ಹೈನುಗಾರಿಕೆ, ಶಿಕ್ಷಣ ಕ್ಷೇತ್ರದಲ್ಲಿ ದುಡಿಯುವ ವರ್ಗದವರಿಗೆ ಹೆಚ್ಚು ಮಂಗಳ ಉಂಟಾಗುತ್ತದೆ. ಒಟ್ಟಾರೆಯಾಗಿ ಈ ವರ್ಷವೂ ಬಲಪ್ರದ ಉತ್ತಮ ಫಲಿತಾಂಶವೇ ಅಧಿಕವಾಗುವ ಅವಕಾಶಗಳಿದ್ದು ಸ್ಥಾನಮಾನ, ಧನಾಭಿವೃದ್ಧಿ ಇತರ ಫಲಗಳು ವರ್ಷಾಂತ್ಯದವರೆಗೂ ಲಭಿಸುತ್ತದೆ. ಕುಲದೇವರ ಸತತ ಪೂಜೆಯಿಂದ ಇಡೀ ಕುಟುಂಬದಲ್ಲಿ ಸಂತೋಷವಿರುವುದು.
ವೃಷಭ ರಾಶಿ: ತಾನೊಂದು ಬಗೆದರೆ ದೈವವೊಂದು ಎನ್ನುವಂತೆ ದುಡುಕು ಸ್ವಭಾವದಿಂದ ಕೈಗೊಂಡ ಕೆಲಸಗಳು ಆರಂಭದಲ್ಲಿ ಋಣಾತ್ಮಕ ಫಲಿತಾಂಶ ನೀಡುವ ಸಂದರ್ಬವಿರುತ್ತದೆ. ಕಳೆದ ವರ್ಷಕ್ಕಿಂತಲೂ ,ಈ ವರ್ಷ ಗುರು, ಶನಿ ಸಂಚಾರದಿಂದ ಹೆಚ್ಚು ಕಷ್ಟಪಟ್ಟು ದುಡಿಯುವ ಅವಶ್ಯ ಇರುತ್ತದೆ. ಪ್ರಯತ್ನದ ಸವಿಯನ್ನು ಪಡೆಯಲು ಸ್ವಲ್ಪಕಾಲ ಕಾಯುವ ಸಂದರ್ಭವಿರುತ್ತದೆ. ತಾಳ್ಮೆಯನ್ನು ಪರೀಕ್ಷಿಸುವ ಕಾಲವಾದರೂ ಸತತ ಪ್ರಯತ್ನದಿಂದ ಉತ್ತಮ ಫಲ ವರ್ಷಾಂತ್ಯದಲ್ಲಿ ನಿರೀಕ್ಷಿಸಬಹುದು. ವರ್ಷದ ಮಧ್ಯಭಾಗದಲ್ಲಿ ಔದ್ಯೋಗಿಕ ಆರ್ಥಿಕ ತಡೆಗಳು ಸಿಲುಕಿ ಸಂತ್ರಾಸಗೊಳ್ಳುವ ಸಂದರ್ಭವಿರುತ್ತದೆ. ಸ್ವಂತ ಪರಿಶ್ರಮದಿಂದ ತಾವು ಕೈಗೊಂಡ ಕಾರ್ಯವು ವಿಸ್ತಾರಗೊಂಡು ಜನ ಮನ್ನಣೆಗೆ ಪಾತ್ರರಾಗುವಿರಿ. ಜೂನ್ ನಂತರದ ದಿನಗಳಲ್ಲಿ ಹಲವಾರು ಧನಾತ್ಮಕ ಬದಲಾವಣೆಯನ್ನು ಹೊಂದಿ ಆತ್ಮವಿಶ್ವಾಸ, ದೃಢತೆಯನ್ನು ಪಡೆಯುವಿರಿ. ವಿದ್ಯಾರ್ಥಿಗಳು ಆರೋಗ್ಯ ಕ್ಷೇತ್ರದಲ್ಲಿ ದುಡಿಯುವರಿಗೆ ಉತ್ತಮ ಫಲಿತಾಂಶಗಳು ಸಿಗುವುದು. ವ್ಯಾಪಾರಸ್ಥರಿಗೆ ಕೃಷಿಕರಿಗೆ ಪ್ರಯತ್ನಕ್ಕೆ ತಕ್ಕ ಫಲವಿರುವುದು. ಅವಘಡಗಳು ಅನಿರೀಕ್ಷಿತ ಅಪಘಾತಗಳು ತೊಂದರೆ ಉಂಟು ಮಾಡು ಬಹುದು. ವರ್ಷಾಂತ್ಯದಲ್ಲಿ ಕೌಟುಂಬಿಕ ವ್ಯವಸ್ಥೆಯಲ್ಲಿ ಏರುಪೇರು ಉಂಟಾಗುವ ಸಂಭವ ಇರುತ್ತದೆ. ಭೂ ವ್ಯವಹಾರದಲ್ಲಿ ಉತ್ತಮ ಫಲಿತಾಂಶವಿರುವುದು. ನವಗ್ರಹ ಸ್ತೋತ್ರ ಪಠಣದಿಂದ ಧೈರ್ಯ ಉಂಟಾಗುತ್ತದೆ.
ಮಿಥುನ ರಾಶಿ: ಈ ಸಂವತ್ಸರವು, ಎಲ್ಲಾ ಗ್ರಹಗತಿಗಳು ಸಮ್ಮಿಶ್ರ ಫಲಿತಾಂಶವನ್ನು ತರುತ್ತದೆ. ಚಂಚಲ ಚಿತ್ತದಿಂದ ಕೆಲಸಗಳು ನಿಧಾನ ಗೊಳ್ಳುವ ಸಾಧ್ಯತೆ ಇರುತ್ತದೆ. ಸ್ವಜನ ಪಕ್ಷಪಾತ ಬಂಧುಗಳ ಕಿರುಕುಳ ಕೆಲಸದಲ್ಲಿ ಒತ್ತಡ ವಿಮುಖರನ್ನಾಗಿ ಮಾಡುವ ಸಂದರ್ಭವಿರುತ್ತದೆ. ಆದರೆ ಶ್ರಮವಹಿಸಿ ಕರ್ತವ್ಯ ನಿರ್ವಹಿಸಿದ್ದಲ್ಲಿ ಎಲ್ಲಾ ತೊಂದರೆಗಳನ್ನು ಮೀರಿ ಬೆಳೆಯುವ ಅವಕಾಶವಿದೆ. ಸಂವತ್ಸರದ ಆರಂಭದಲ್ಲಿ ಆರೋಗ್ಯದಲ್ಲಿ ಏರುಪೇರು ಸಣ್ಣಪುಟ್ಟ ಅಪಘಾತಗಳು, ಆಘಾತಗಳು ಬಂದೊದಗಿದರು ಶ್ರೀದೇವರ ಅನುಗ್ರಹದಿಂದ ಚೇತರಿಸಿಕೊಳ್ಳುವ ಸಾಮರ್ಥ್ಯವಿರುತ್ತದೆ. ವಿದ್ಯಾರ್ಥಿಗಳಿಗೆ ಕೃಷಿಕರಿಗೆ ಮುಖ್ಯವಾಗಿ ಉದ್ಯೋಗ ವರ್ಗದವರಿಗೆ ಲಾಭ–ನಷ್ಟಗಳು ಸರಿಸಮನಾಗಿರುತ್ತದೆ. ಸಮಾಜಘಾತುಕ ಶಕ್ತಿಗಳಿಂದ ಕಿರಿ ಕಿರಿ ಉಂಟಾಗಿ ನಷ್ಟವನ್ನು ಹೊಂದುವ ಸಾಧ್ಯತೆ ಇರುತ್ತದೆ .ವೃತ್ತಿಪರರಿಗೆ ಅವರ ಕ್ಷೇತ್ರದಲ್ಲಿ ಉನ್ನತಿ ಹೊಂದುವ ಹೇರಳ ಅವಕಾಶಗಳು ಲಭ್ಯವಿರುತ್ತದೆ. ವಿದೇಶ ಪ್ರಯಾಣ, ಶೈಕ್ಷಣಿಕ ಸಾಧನೆಗೆ ಸನ್ಮಾನಗಳೊಂದಿಗೆ ಪ್ರಯತ್ನಕ್ಕೆ ತಕ್ಕ ಫಲ ಹಾಗೂ ಅನಿರೀಕ್ಷಿತ ಧನಲಾಭವಾಗುವ ಸಂಭವವಿರುತ್ತದೆ.
ಕರ್ಕಾಟಕ ರಾಶಿ: ಕಳೆದ ಎರಡು ಮೂರು ವರುಷಗಳಿಂದಲೂ ನಿರೀಕ್ಷೆಯಲ್ಲಿರುವ ಫಲಗಳು ಕೈ ಸೇರುವ ಸಾಧ್ಯತೆ ಇದೆ. ಈ ಸಂವತ್ಸರದಲ್ಲಿ ವಿಶೇಷ ಭಾಗ್ಯ ಫಲಗಳು ತಮ್ಮದಾಗಿ ಹಲವು ಧನಾತ್ಮಕ ಚಿಂತನೆಗಳು ಒದಗಿ ಬರುವುದು. ಇದರಿಂದ ನಿಮ್ಮ ಸಾಮಾಜಿಕ ಸ್ಥಾನಮಾನಗಳು ಅಧಿಕವಾಗಿ ಸಂತೃಪ್ತರಾಗುವಿರಿ. ಸಾಧಕರಿಗೆ ಗುರಿಯ ಬಗ್ಗೆ ಮಾತ್ರ ಚಿಂತೆ ಎನ್ನುವಂತೆ ಏಕಾಗ್ರತೆಯ ಕೆಲಸಕ್ಕೆ ಭಂಗ ಬರುವುದಿಲ್ಲ. ಕೃಷಿ, ಹೈನುಗಾರಿಕೆ ವಾಣಿಜ್ಯ ಬೆಳೆಗಾರರಿಗೆ, ವ್ಯಾಪಾರಸ್ಥರಿಗೆ ಶುಭ ಫಲವಿರುವುದು. ಸಂವತ್ಸರದ ಮಧ್ಯಭಾಗದವರೆಗೂ ಯಶಸ್ಸಿನ ಫಲಗಳೇ ಜಾಸ್ತಿ. ಸೆಪ್ಟಂಬರ್ ಮಧ್ಯಭಾಗದ ನಂತರ ಆರೋಗ್ಯದಲ್ಲಿ ಏರುಪೇರು, ಕೆಲವು ವಯೋ ಸಹಜ ಕಾಯಿಲೆಯ ಚಿಹ್ನೆಗಳು ಕಂಡುಬರುವುದು. ಆದರೂ ದೃತಿಗೆಡುವ ಅಗತ್ಯವಿರುವುದಿಲ್ಲ. ಉದ್ಯೋಗ ಮತ್ತು ವೃತ್ತಿ ಕ್ಷೇತ್ರಗಳಲ್ಲಿ ಪ್ರತಿಸ್ಪರ್ಧಿಗಳಿಂದ ಅವಹೇಳನ ತೊಂದರೆಗಳು ಉಂಟಾಗಿ ಶಾಂತತೆಯನ್ನು ಕಳೆದುಕೊಳ್ಳುವ ಪ್ರಸಂಗಗಳು ಒದಗಿ ಬರುತ್ತದೆ. ಸರಿಯಾದ ಕಾಲದಲ್ಲಿ ಗೆಳೆಯರ ಸಹಕಾರ ಮತ್ತು ಬಂಧು ಜನರ ಸಾಮೀಪ್ಯದಿಂದ ಅವಘಡಗಳಿಂದ ಪಾರಾಗುವಿರಿ. ಒಟ್ಟಾರೆಯಾಗಿ ಈ ಸಂವತ್ಸರದಲ್ಲಿ ಶುಭ ಫಲಗಳಿರುವುದು.
ಸಿಂಹ ರಾಶಿ: ಈ ವರ್ಷ ಗ್ರಹಬಲವು ಉತ್ತಮ ರೀತಿಯಲ್ಲಿ ಲಭಿಸುವುದು. ಅಪರಿಮಿತ ಉತ್ಸಾಹಿಗಳಾದ ನಿಮಗೆ ಹಲವು ಅವಕಾಶಗಳು ಒದಗಿಬರುತ್ತದೆ. ವಿಪರೀತ ಸ್ವಾಭಿಮಾನ ಅಹಂಕಾರಕ್ಕೆ ತಿರುಗುವಂತಾಗಬಾರದು. ಬೇರೆಯವರು ನಿಮ್ಮ ಶ್ರಮದ ಕೆಲಸವನ್ನು ಗುರುತಿಸಿ ಅನುಕರಿಸುವರು. ಕೃಷಿ, ಹೈನುಗಾರಿಕೆಯಲ್ಲಿ ಸಮಾಧಾನಕರ ಫಲಿತಾಂಶಗಳು ಕಂಡುಬರುತ್ತದೆ. ಹಣಕಾಸಿನ ವಿಚಾರದಲ್ಲಿ ಯಾವುದೇ ದೊಡ್ಡ ಸಮಸ್ಯೆಗಳು ಬರುವುದಿಲ್ಲ. ದುಡುಗಿನ ನಿರ್ಧಾರದಿಂದ ಕೆಲವೊಮ್ಮೆ ಪಶ್ಚಾತಾಪ ಪಡುವಂತೆ ಆಗಬಹುದು. ಜೂನ್ ನಂತರ ನಡೆಯುವ ವ್ಯವಹಾರದಲ್ಲಿ ಆರ್ಥಿಕ ಲಾಭಗಳಿದ್ದರೂ ಧಾನ ಧರ್ಮದ ವಿಚಾರದಲ್ಲಿ ಉದಾರಿಗಳಾಗಿರುವಿರಿ. ಅಕ್ಟೋಬರ್ ನಂತರದಲ್ಲಿ ತೀರ್ಥಯಾತ್ರೆ, ಕ್ಷೇತ್ರ ದರ್ಶನಕ್ಕೆ ಹೊರಟು ಮಾನಸಿಕ ನೆಮ್ಮದಿಯನ್ನು ಹೊಂದುವಿರಿ. ಅತಿ ಸಂತೋಷದಿಂದ ಮಾತನಾಡಿ ವಿರೋಧಿಗಳನ್ನು ಹುಟ್ಟುಹಾಕಿಕೊಳ್ಳುವ ಸಂದರ್ಭವಿರುತ್ತದೆ. ಮಕ್ಕಳ ಕುರಿತು ಚಿಂತೆ ಅಗತ್ಯವಿಲ್ಲ. ಅವರು ಸಾಧನೆ ತೋರಿ ಮನ:ಸಂಕಲ್ಪವನ್ನು ನೆರವೇರಿಸುವರು. ಸಂವತ್ಸರ ಪೂರ್ತಿ ಶುಭ ಶಕುನಗಳೇ ಅಧಿಕವಾಗಿರುವುದು. ಕುಲದೇವರ ಆರಾಧನೆ ಸದಾ ಇರಲಿ.
ಕನ್ಯಾ ರಾಶಿ: ಈ ಸಂವತ್ಸರದಲ್ಲಿ ಹೆಚ್ಚಾಗಿ ಬಾಕಿ ಉಳಿದ ಕೆಲಸಗಳು ಕ್ಷಿಪ್ರ ರೀತಿಯಲ್ಲಿ ಬೆಳವಣಿಗೆ ಹೊಂದಿ ಅನ್ಯರು ನಿಮ್ಮನ್ನು ಗುರುತಿಸುವಂತೆ ಮಾಡುವಿರಿ . ಚಂಚಲ ಚಿತ್ತರಾಗದೆ ಏಕಾಗ್ರತೆಯಿಂದ ಕೆಲಸ ನಿರ್ವಹಿಸಿ ಇತರರಿಗೆ ಮಾದರಿಯಾಗಿರುವರಿ. ಆರ್ಥಿಕವಾಗಿ ಚೇತರಿಕೆ ಹೊಂದಿ ಹಣ ಸಂಗ್ರಹಣವಾಗಿ ಧಾರ್ಮಿಕ ಕಾರ್ಯದಲ್ಲಿ ತೊಡಗಿಕೊಳ್ಳುವಿರಿ. ಮನೆ ಮಂದಿ ಎಲ್ಲರೂ ಸಂತಸದಿಂದ ನಿಮ್ಮ ಮಾತಿಗೆ ಮನ್ನಣೆ ಕೊಡುವುದರಿಂದ ಉತ್ಸಾಹದಿಂದ ಕೆಲಸವನ್ನು ಮುಂದುವರಿಸುವಿರಿ. ಭೂ ವ್ಯವಹಾರ ಲೋಹ ಮತ್ತು ರಾಸಾಯನಿಕ ಕೈಗಾರಿಕಾ ಕ್ಷೇತ್ರದಲ್ಲಿ ಮುಂದುವರಿದವರಿಗೆ ವಿಶೇಷ ಮನ್ನಣೆ ಸಿಗಲಿದೆ. ಕೆಲವೊಮ್ಮೆ ಆಲಸ್ಯತನದಿಂದ ಅವಕಾಶ ವಂಚಿತರಾಗುವುದಲದೇ ಅವಕಾಶ ತಪ್ಪಿದ್ದಕ್ಕೆ ಮರುಕ ಪಡುವಿರಿ. ದೀರ್ಘಕಾಲಿನ ರೋಗರು ದಿನ ರುಜಿನಗಳು ನಿಯಂತ್ರಣ ಹೊಂದಿ ಮಾನಸಿಕ ನೆಮ್ಮದಿಯನ್ನು ಪಡೆಯುವಿರಿ. ನಿರಂತರ ಕೆಲಸಗಳಿಂದ ದೇಹ ಆರೋಗ್ಯ ಏರು–ಪೇರುಗಳಾದರು ಉತ್ತಮ ಪ್ರತಿಫಲ ಪಡೆಯುವಿರಿ. ಸಜ್ಜನರ ಸಹವಾಸದಿಂದ ಆನಂದ ಪಡೆಯುವಿರಿ. ದೇವತಾ ಕಾರ್ಯಗಳು ಸದಾ ನಡೆಯುತ್ತಿರಲಿ.
ತುಲಾ ರಾಶಿ: ದೈವೀ ಪ್ರಾರ್ಥನೆಯಿಂದ ವಿಶೇಷ ಫಲಪ್ರಾಪ್ತಿ ಎನ್ನುವಂತೆ ಫಲಿತಾಂಶ ಪಡೆಯಲು ಸತತ ದೇವರ ಆರಾಧನೆಯೂ ಬೇಕು. ಅದೃಷ್ಟದ ವಿಚಾರದಲ್ಲಿ ಗ್ರಹಗತಿಗಳ ಅನುಕೂಲ ಕಡಿಮೆ. ಮೊದಲ ಪ್ರಯತ್ನಗಳಲ್ಲಿಯೇ ಎಲ್ಲಾ ಯಶಸ್ಸುಗಳು ಸಿಗದಿರಬಹುದು. ಪ್ರಯತ್ನ ಕೇಂದ್ರೀಕೃತ ಕೆಲಸಗಳತ್ತ ಗಮನಹರಿಸಿ, ಕೇವಲ ಫಲಿತಾಂಶ ಕೇಂದ್ರದಡೆ ಗುರಿಯೊಂದೇ ಸಾಲದು. ಶುಭ ಕೆಲಸಗಳ ಪ್ರಾರಂಭದ ಮುಂಜೆ ಸಾಧಕ–ಬಾದಕಗಳ ಅಧ್ಯಯನ ಅವಶ್ಯ. ಸಂವತ್ಸರದ ಪ್ರಾರಂಭದಲ್ಲಿ ಅಂದರೆ ಸುಮಾರು ಜೂನ್ ವರೆಗೂ ಅಕಸ್ಮಾತ್ ಆರೋಗ್ಯದಲ್ಲಿ ತೊಂದರೆಗಳು, ವ್ಯಾಪಾರದಲ್ಲಿ ನಷ್ಟಗಳು ಸಂಭವಿಸಿ ದುಃಖ ಹೊಂದುವ ಸಾಧ್ಯತೆಗಳಿವೆ. ಆದರೆ ಜುಲೈ ನಂತರದ ದಿನಗಳಲ್ಲಿ ಹಾಗೂ ಸಂವತ್ಸರದ ಕೊನೆಯವರೆಗೂ ಹಲವು ಕ್ಷೇತ್ರದಲ್ಲಿ ಪ್ರಯತ್ನ ಮಾಡುವಿರಿ. ಹಿತಶತ್ರುಗಳಿಗೂ ನಿಬ್ಬೆರಗಾಗುವಂತೆ ಫಲಿತಾಂಶಗಳು ದೊರೆಯುತ್ತದೆ. ಮಾತಿನಿಂದ ವಿನಾಕಾರಣ ದ್ವೇಷ ಕಟ್ಟಿಕೊಳ್ಳುವ ಸಂಭವವಿರುತ್ತದೆ. ವೃತ್ತಿಪರರಿಗೆ, ಕೃಷಿ, ಹೈನುಗಾರಿಕೆ ಕ್ಷೇತ್ರದಲ್ಲಿ ವಿಪರೀತ ಲಾಭ ಅನ್ನುವಷ್ಟು ಫಲಿತಾಂಶ ದೊರೆಯದಿದ್ದರೂ ಮನ: ಸಂತೋಷಕ್ಕೆ ಕೊರತೆ ಇರುವುದಿಲ್ಲ. ಶತ್ರುಗಳ ಉಪಟಳ ವಿನಾಕಾರಣ ಅಪವಾದಗಳು, ವ್ಯವಹಾರ ಭಿನ್ನಾಭಿಪ್ರಾಯಗಳು ಮನ:ಕ್ಲೇಶ ಉಂಟು ಮಾಡುವುದು.
ವೃಶ್ಚಿಕ ರಾಶಿ: ಈ ವರ್ಷ ಉತ್ತಮ ಫಲಿತಾಂಶಗಳೆಂದೇ ತಿಳಿಯಬಹುದು. ವಿದ್ಯಾರ್ಥಿಗಳಿಗೆ, ಯುವಕರಿಗೆ ಮತ್ತು ವ್ಯಾಪಾರಸ್ಥರಿಗೆ ದೈವ ಕೃಪೆ ಚೆನ್ನಾಗಿರುವುದು. ಬಹುಕಾಲದಿಂದ ನಿರೀಕ್ಷಿತಗೊಂಡು ಬಾಕಿ ಉಳಿದಿರುವ ಕೆಲಸಗಳು ಸಸೂತ್ರವಾಗಿ ನೆರವೇರುವುದು. ಅವಕಾಶಗಳ ಆಯ್ಕೆಗಳಲ್ಲಿ ಗೊಂದಲ ಉಂಟಾಗುವುದು. ಮನೆ ಕಟ್ಟುವ ಯೋಗ, ಭೂಮಿ ಖರೀದಿ, ವಿದೇಶ ಪ್ರಯಾಣದ ಅವಕಾಶಗಳು ಸಿಗುವುದು. ಪ್ರಯತ್ನ ಪಟ್ಟ ಕೆಲಸದಲ್ಲಿ ಯಶಸ್ಸು ನಿಶ್ಚಿತ. ಸಿರಿವಂತರಾಗುವ ಎಲ್ಲಾ ಲಕ್ಷಣಗಳು ಇರುತ್ತದೆ. ಸದಾ ಸತ್ವಿಚಾರಗಳನ್ನು ಎಣಿಸುವ ನೀವು ಈ ವರ್ಷ ತುಂಬಾ ಉದಾರಿಯಾಗಿರುವಿರಿ. ಹಲವು ಧರ್ಮಗಳನ್ನು ಮಾಡುವಿರಿ. ಮನೆಯಲ್ಲಿ ಶುಭಾರಂಭಗಳು ಹೆಚ್ಚು ನೆರವೇರುವುದು. ಕೃಷಿ ,ಹೈನುಗಾರಿಕೆಯಲ್ಲಿ ತೊಡಗಿ ಕೊಂಡವರಿಗೆ ಆರ್ಥಿಕ ಚೈತನ್ಯ ಉಂಟಾಗುವುದು. ಸಾಲ ಕೇಳುವವರು ಕೂಡ ವಿಪರೀತ ಸ್ನೇಹತನ ಬೆಳೆಸಿ ತೊಂದರೆ ಕೊಡುವರು. ಸಂವತ್ಸರದ ಕೊನೆಯ ಎರಡು ಮೂರು ತಿಂಗಳು ದಾಯಾದಿ ಮತ್ಸರ ಅನಪೇಕ್ಷಿತ ಖರ್ಚುಗಳು ಬರುವುದು.
ಧನು ರಾಶಿ:ನಾನೊಂದು ಬಗೆದರೆ ದೈವವೊಂದು…….. ಎನ್ನುವಂತೆ ಈ ವರ್ಷ ಋಣಾತ್ಮಕ ಫಲಗಳೇ ಅಧಿಕವಾಗಿರುವುದು. ಸಮಾನಾಂತರ ರೇಖೆಯಲ್ಲಿ ಯೋಚಿಸಿದ ಕೆಲಸಗಳು ನಿರೀಕ್ಷೆಯಂತೆ ಫಲ ಸಿಗದೆ ವಿಫಲವಾಗುವ ಸಂದರ್ಭವಿರುತ್ತದೆ. ವಿನಾಕಾರಣ ಶತ್ರುಪೀಡೆ ಮತ್ತು ನಮ್ಮವರೇ ನಮ್ಮನ್ನು ಕಠಿಣ ಪರಿಸ್ಥಿತಿಗೆ ಸಿಲುಕಿಸಿದಂತೆ ಹಲವು ಬಾರಿ ತೊಂದರೆಗೆ ಸಿಲುಕುವ ಅಪಾಯವಿದೆ. ಕೋರ್ಟು ಕಚೇರಿ ವೃಥಾ ಅಲೆದಾಟದಿಂದ ಸಂತ್ರಾಸಗೊಳ್ಳುವಿರಿ. ವಿದ್ಯಾರ್ಥಿಗಳಿಗೆ,ವೃತಿಪರರಿಗೆ ವಿಶೇಷ ಶುಭಫಲಗಳಿಲ್ಲದಿದ್ದರೂ ಕೆಲವೊಮ್ಮೆ ನಿಶ್ಚಿತ ಗುರಿಯಿಂದ ದುಪ್ಪಟ್ಟು ಪ್ರಯತ್ನದಿಂದ ಫಲಿತಾಂಶಗಳು ದೊರೆತು ಸಮಾಧಾನ ಹೊಂದುವಿರಿ. ಉತ್ಸಾಹ ವಿಪರೀತವಿದ್ದರೂ ಮನೋನಿಗ್ರಹ ಮಾಡಿಕೊಂಡು ಸ್ಪಷ್ಟ ನಿರ್ಣಯಕ್ಕೆ ಬರಲು ಹೆಣಗಾಡಬೇಕಾದ ಸನ್ನಿವೇಶ ಉಂಟಾಗುತ್ತದೆ. ಕುಟುಂಬಸ್ಥರ ತೀರಾ ಆತ್ಮೀಯ ಗೆಳೆಯನನ್ನು ಅಗಲುವ ಸಂದರ್ಭ ಬರುವುದರಿಂದ ತುಂಬಾ ದುಃಖಿತರಾಗುವಿರಿ. ಸಂವತ್ಸರದ ಉತ್ತರಾರ್ಧದಲ್ಲಿ ಆರೋಗ್ಯದಲ್ಲಿ ಚೇತರಿಕೆ. ದುಡಿಯುವ ಹುಮ್ಮಸ್ಸು ಮರುಕಳಿಸಿ ಕೈಗೊಂಡ ಕಾರ್ಯಗಳು ಯಶಸ್ಸಿನ ಹಂತ ತಲುಪುವುದು. ನವಗ್ರಹ ಪೀಡಾ ಪರಿಹಾರ ಸ್ತೋತ್ರವನ್ನ ಪಠಿಸಿದರೆ ಉತ್ತಮ.
ಮಕರ ರಾಶಿ:ಕಳೆದೆರಡು ವರುಷಗಳಿಂದ ಅನುಭವಿಸುತ್ತಿರುವ ಕಷ್ಟಕಾರ್ಪಣ್ಯಗಳು ನಿಧಾನವಾಗಿ ಮರೆಯಾಗಿ ಶುಭ ಸೂಚನೆ ಸಿಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತದೆ. ಉತ್ತಮ ಫಲಿತಾಂಶಗಳನ್ನು ಪಡೆಯಲು ಹಲವು ರೀತಿಯಿಂದ ಪ್ರಯತ್ನ ಮಾಡಬೇಕಾಗುತ್ತದೆ. ಸುಲಭವಾಗಿ ಫಲಿತಾಂಶ ಸಿಗದೇ ಇದ್ದರೂ, ನಿಧಾನವಾದರೂ ಪ್ರಗತಿ ಇರುತ್ತದೆ. ಬಂದು ಮಿತ್ರರ ಆಗಮನ ಮತ್ತು ಸಹಕಾರ ಯಶಸ್ಸನ್ನು ಹೊಂದಲು ಸಹಕಾರಿಯಾಗುತ್ತದೆ. ಮಿಶ್ರ ಫಲಗಳಿಂದ ಕೂಡಿದ ಈ ಸಂವತ್ಸವರದಲ್ಲಿ ’ಧೈರ್ಯಂ ಸರ್ವತ್ರ ಸಾಧನಂ’ ಎನ್ನುವಂತೆ ಯೋಜನೆ ಮತ್ತು ಯೋಚನೆ ಹಾಕಿ ಮಾಡಿದ ಕೆಲಸಗಳು ಉತ್ತಮ ಫಲಿತಾಂಶ ಕೂಡಬಲ್ಲದು. ನೀವು ಕಲಿತ ಶಾಶ್ವತವಾದ ವಿದ್ಯೆಯೇ ಸಂಪತ್ತಿಗಿಂತ ಹೆಚ್ಚು ಕಾಪಾಡುವುದು. ಕುಲದೇವರ ಸತತ ಆರಾಧನೆಯಿಂದ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನೆರವೇರುವುದು. ವಿದ್ಯಾರ್ಥಿಗಳಿಗೆ, ಕೃಷಿಕರಿಗೆ, ಹೈನುಗಾರಿಕೆ ವೃತ್ತಿಯವರಿಗೆ ಸಂವತ್ಸರದ ಮಧ್ಯ ಭಾಗವೂ ಉತ್ತಮ ಫಲಿತಾಂಶವನ್ನು ತಂದು ಕೊಡುವುದು. ನಾಗರಾಧನೆಯಿಂದ ವಿಶೇಷ ಫಲಪ್ರಾಪ್ತಿ.
ಕುಂಭ ರಾಶಿ: ಈ ವರ್ಷ ಹಲವು ಸಂದರ್ಭದಲ್ಲೇ ಜನ್ಮ ಶನಿಯ ತೊಂದರೆಯಿಂದಾಗಿ ಪ್ರಯತ್ನಗಳು ಹಲವು ಬಾರಿ ಆಕಾಶಕ್ಕೆ ಏಣಿ ಇಟ್ಟಂತೆ ತ್ರಾಸದಾಯವಾಗಿರುತ್ತದೆ. ಚೋರಭಯ, ಅಪಘಾತ ಭಯ ಮತ್ತು ನಂಬಿದವರಿಂದಲೇ ಮೋಸ ಹೋಗುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳು, ವೃತ್ತಿಪರರು ವಿಶೇಷ ಶ್ರಮವಹಿಸಿ ಕೆಲಸ ನಿರ್ವಹಿಸಬೇಕು. ಗೃಹ ಗತಿಗಳ ಸಹಾಯವನ್ನು ನಂಬಿಕೊಳ್ಳದೇ ಮನೋಚೈತನ್ಯವನ್ನು ಹೆಚ್ಚಿಸಿಕೊಳ್ಳುವ ಮಾರ್ಗಗಳನ್ನು ಕಂಡುಕೊಳ್ಳಬೇಕು. ಇಂದಿನ ಚಿಗುರು ನಾಳಿನ ಮರ ಎನ್ನುವಂತೆ ವಿಪರೀತವಾಗಿ ತತ್ ಕ್ಷಣದ ನಿರೀಕ್ಷೆಗಳನ್ನು ಮಾಡಬೇಡಿ. ನೀವು ಮಾಡಿದ ಉತ್ತಮ ಕೆಲಸಗಳೇ ಮುಂದೆ ಹೆಚ್ಚು ಕೀರ್ತಿ ತರುತ್ತದೆ. ಸಂವತ್ಸರದ ಮೊದಲಾರ್ಧ ಉತ್ತಮ ಫಲ ಸಿಗದಿದ್ದರೂ ಉತ್ತರಾರ್ಧದಲ್ಲಿ ನಿರೀಕ್ಷಿತ ಫಲಿತಾಂಶಗಳು ದೊರೆತು ಯಶಸ್ಸನ್ನು ಹೊಂದುವಿರಿ. ಉತ್ತಮ ಕೆಲಸ ಕಾರ್ಯಗಳನ್ನು ಪ್ರಾರಂಭಿಸಲು ಹಾಗೂ ವಿದ್ಯಾರ್ಥಿಗಳು ಉನ್ನತ ವ್ಯಾಸಂಗದ ಹಾದಿಯನ್ನು ಕಂಡುಕೊಳ್ಳುವಿರಿ. ಕುಲದೇವರ ದರ್ಶನ ದೈವೀ ಪೂಜೆಯಿಂದ ಸತ್ಪಲ ದೊರೆಯುವುದು.
ಮೀನ ರಾಶಿ: ಈ ವರ್ಷವೂ ದೈವೀ ಬಲವು ಕಡಿಮೆ ಎನ್ನಬಹುದು. ಆರೋಗ್ಯದಲ್ಲಿ ಕಿರಿಕಿರಿ ಬಂಧುಗಳಿಂದ ಕಿರುಕುಳ, ದಾಯಾದಿಗಳಿಂದ ತಗಾದೆ, ದುಡುಕು ಕೋಪಗಳಿಂದ ವಿನಾಕಾರಣ ನಿಷ್ಟುರ ಹೊಂದುವಿರಿ. ಗೆಳೆಯರು ಅನುಮಾನಗೊಂಡು ದೂರ ಸರಿಯುವರು. ಬೆಳೆ ಹಾನಿ, ಮಾನ ಹಾನಿಗಳಂತಹ ತೊಂದರೆಗಳಿಗೆ ಸಿಲುಕಿ ಸಂತ್ರಾಸಗೊಳ್ಳುವಿರಿ. ಸಂವತ್ಸರದ ಕೊನೆಯ ಮೂರು ಮಾಸಗಳು ಸ್ವಲ್ಪ ಚೇತರಿಕೆಯಿಂದ ಕಾಣಬಹುದು. ಋಣಾತ್ಮಕ ಚಿಂತನೆಗಳಿಂದ ದೂರವಿರಿ. ಅದು ಪಾತಾಳಕ್ಕೆ ಕೊಂಡೊಯ್ಯುವ ಯತ್ನ ಮಾಡುತ್ತಿದೆ. ಪ್ರಯತ್ನದಲ್ಲಿ ಹೆಚ್ಚಿಗೆ ಭರವಸೆ ಇಟ್ಟು ಆತ್ಮವಿಶ್ವಾಸದಲ್ಲಿ ಕೆಲಸ ಮಾಡಬೇಕು. ಗುರಿ ಯೋಜನೆಗಳು ಸಾಕಾರಗೊಳ್ಳಲು ಕುಲದೇವರ ಆರಾಧನೆ ಸತತವಾಗಿ ಇರಬೇಕು. ಸ್ವಂತ ಉದ್ಯಮಿದಾರರಿಗೆ ಬರಬೇಕಾದ ಹಣವು ಶೀಘ್ರವೇ ಕೈ ತಲುಪುವುದು. ಸಂವತ್ಸರದ ಮಧ್ಯ ಭಾಗದಲ್ಲಿ ಮಕ್ಕಳಿಂದ ವಿಶೇಷ ಫಲಭಾಗಗಳು ಲಭಿಸುತ್ತದೆ.
|| ಸರ್ವೇಷಾಂ ಸನ್ಮಂಗಲಾನಿ ಭವಂತು ||