Menu

ಕ್ರೋಧಿ ಸಂವತ್ಸರದ ಸಮುದಾಯ ಫಲ (2024-2025)

ಕ್ರೋಧಿ ಸಂವತ್ಸರದಲ್ಲಿ ಚಾಂದ್ರಮಾನ ಪದ್ಧತಿಯಲ್ಲಿ ಪೂಜ್ಯ ರಾಜನಾಗಿಯೂ ಶನಿಮಂತ್ರಿಯಾಗಿಯೂ ಇದ್ದಾರೆ.  ಸೌರಮಾನ ಪದ್ಧತಿಯಂತೆ ಶನಿಯೇ ರಾಜ ಕುಜನೇ ಮಂತ್ರಿಯಾಗಿ ಆಯ್ಕೆಯಾಗಿರುತ್ತಾರೆ.  ಶಾಸ್ತ್ರ ದೃಷ್ಟಿಯಲ್ಲಿ ಇಬ್ಬರು ಪಾಪಗ್ರಹರಾಗಿದ್ದು ಕೆಟ್ಟದ್ದನ್ನೇ ಉಂಟು ಮಾಡುವವರು. ಅಂತೆಯೇ ಸೇನಾಧಿಪತಿ ಶನಿ ಸಸ್ಯಗಳ ಒಡೆಯ ಕುಜ ಮೇಘಗಳ ಯಜಮಾನ ಕುಜನಾಗಿದ್ದು ರಸಾಧಿಪತಿ ಗುರು ನಿರಸಾಧಿಪತಿ ಪುನ: ಕುಜನಾಗಿದ್ದಾನೆ. ಈ ನವ ನಾಯಕರಲ್ಲಿ ಕೇವಲ ರಸಾಧಿಪಗುರು ಶುಭಗ್ರಹನಾಗಿದ್ದಾರೆ.  ಅಂತೆಯೇ ಉಪನಾಯಕರಾಗಿ ಹೆಚ್ಚಿನ ಖಾತೆಗಳನ್ನು ಪಾಪಗ್ರಹರಾದ ಕುಜ ಶನಿಗಳೇ ವಹಿಸಿಕೊಂಡಿದ್ದಾರೆ. ಇದು ತುಂಬಾ ಅಶುಭ ಸೂಚನೆಯಾಗಿದೆ. ಆದರೆ ಕೆಲವೊಂದು ವಿಭಾಗ ಮಾತ್ರ ಶುಭಗ್ರಹಾಧೀನದಲ್ಲಿರುವುದು ಶುಭ ಸಮದಾನವೆನ್ನಬಹುದು. ಈ ಕ್ರೋಧಿ ಸಂವತ್ಸರದ ಫಲದಂತೆ ಎಲ್ಲಾ ಕಡೆ ರೋಗರುಜಿನಗಳು, ಪ್ರಜೆಗಳಲ್ಲಿ, ರಾಜರಲ್ಲಿ ಪರಸ್ಪರ ವೈರತ್ವ ಕಂಡುಬರುತ್ತದೆ.  ಅಗ್ನಿ ಭಯ ವಾಯು ಪ್ರಕೋಪಗಳಿಂದ ಪ್ರಕೃತಿ ವಿಕೋಪ, ಭೂಕಂಪನಗಳುಂಟಾಗಬಹುದು. ಯುದ್ಧಬೀತಿ, ರೋಗ ಪೀಡೆಗಳಿಂದ ಜನ ಜೀವನ ಕಷ್ಟ ಸಾಧ್ಯವಾಗುವುದು. ಹೆಚ್ಚಿನ ಜನರು ಅಧರ್ಮ ನಿರತರಾಗಿದ್ದು, ರಾಜರು ಯುದ್ಧಪ್ರಿಯರಾಗಿರುತ್ತಾರೆ.  ಕಳ್ಳರ ಭಯ ಪ್ರಕೃತಿ ವಿಕೋಪ ಯುದ್ಧ ಭೀತಿಗಳುಂಟಾಗಬಹುದು.  ಕೆಂಪು ಧಾನ್ಯ ಬೆಲೆ ಉಂಟಾಗುವುದು. ಮಧ್ಯಮ ಮಳೆ ಸಸ್ಯಸಮೃದ್ಧಿಯಿರಬಹುದು. ಗುಡುಗು ಮಿಂಚುಗಳಿಂದ ಕೂಡಿದ ನೀಲ ಎಂಬ ಹೆಸರಿನ ಮೇಘವು ಮಧ್ಯಮ ರೀತಿಯಲ್ಲಿ ಮಳೆ ಸುರಿಸಲಿದೆ. ಒಂದು ಕೊಳಗ(ಆಡಕ) ಪ್ರಮಾಣದ ಮಳೆ ಬರುವುದು. ರಸಾಧಿಪತಿ ಗುರು ಶುಭ ಧನಧ್ಯಾನಗಳನ್ನು ಉಂಟು ಮಾಡಲಿದ್ದಾನೆ. ಉಳಿದಂತೆ ಅಧಿಪತಿಗಳು ಪಾಪಗ್ರಹರೆ ಆಗಿರುವುದರಿಂದ ಫಲವು ಅಂತೆಯೇ ಇರುವುದು. ರವಿಯು ಆರ್ದ್ರಾ ಪ್ರವೇಶ ಮುಹೂರ್ತ ಜಗದ್ವಿತ್ತನ್ನು ಸಸ್ಯನಾಶವನ್ನು ಸೂಚಿಸುತ್ತಿದೆ.  ವಾರುಣನಾಮಕ ಮಂಡಲವು ಶುಭಫಲದಾಯಕವಾಗಿದೆ. ’ಸರ್ವತ್ರ ಸಂಪತ್ಪ್ರದಾಆಗಿದೆ. ಮೇಷದ ನಂತರ ಗುರುವು ವೃಷಭ ರಾಶಿ ಪ್ರವೇಶದಿಂದ ಶಿಶುಪಶು ವನಿತಾ ಸಮೂಹಕ್ಕೆ ಆಪತ್ತು,  ಭೂ ಸಂಬಂಧಿ ಕಲಹಗಳುಂಟಾಗಲಿದೆ.  ಕುಂಭರಾಶಿ ಗತಶನಿಯೂ ಪ್ರಜೆಗಳಿಗೆ ಶುಭಕೃತ್ ಆಗಲಿದ್ದಾನೆ.  ಕೆಲವೊಂದು ಪ್ರದೇಶಗಳಿಗೆ ಅನಿಷ್ಟ ಪ್ರದನಾಗಿದ್ದಾನೆ.  ಒಟ್ಟಿನಲ್ಲಿ ಮಧ್ಯಮ ಸುಭಿಕ್ಷ ಫಲವಿದೆ.  ಮೇಷ ಸಂಕ್ರಾಂತಿ ಕಾಲಪುರುಷನು ಎಂಟು ಕೈಗಳಿಂದ, ನಾಲ್ಕು ಮುಖಗಳಿಂದ ತ್ರಿನೇತ್ರನಾಗಿ ನೀಲ ವರ್ಣದಿಂದ ರಾಕ್ಷಸಾಕಾರ ಹೊಂದಿದ್ದಾನೆ.  ಆತನು ಈ ವರ್ಷದಲ್ಲಿ ಹರಳೆಣ್ಣೆಯನ್ನು ಹಚ್ಚಿಕೊಂಡು ಸರಸ್ವತಿಯಲ್ಲಿ ಮಿಂದಿದ್ದಾನೆ.  ಬೆಳ್ಳಿಯ ಆಭರಣ ಧರಿಸಿ ಚಂದನ ಲೇಪಿಸಿಕೊಂಡು ಬಾಗಳ ಹೂವು ಮುಡಿದಿದ್ದಾನೆ.  ತಾಮ್ರ ಪಾತ್ರೆಯಲ್ಲಿ ತಿಂಡಿ (ಕಜ್ಜಾಯ) ತಿಂದು ಕಡ್ಗ ಖಡ್ಗಾಯುಧರ ಹಿಡಿದಿದ್ದಾನೆ.  ಹಂದಿಯನ್ನೇ ವಾಹನವಾಗಿ ಮಾಡಿಕೊಂಡು ಮದ್ದಳೆ ವಾದ್ಯ ಹಿಡಿದಿದ್ದಾನೆ.  ಕಪ್ಪು ಕೊಡೆ ಹಿಡಿದುಕೊಂಡು ಕಡಲೆ ಅವರೆಗಳಿಂದ ಅಕ್ಷತೆ ಮಾಡಿಕೊಂಡಿದ್ದಾನೆ.  ನಾಚಿಕೆಯ ಮುಖಮಂಡಲದ ಈ ಕಾಲ ವಿಷು ಪುರುಷನು ಪಶ್ಚಿಮ ದಿಕ್ಕಿಗೆ ಹೊರಟು ಹೋಗುತ್ತಾನೆ.  ಈತ ಧರೆಸಿದ ಎಲ್ಲಾ ವಸ್ತುಗಳು ನಾಶವಾಗಿ ತುಟ್ಟಿಯಾಗುತ್ತದೆ.  ಯಾವ ದಿಕ್ಕಿಗೆ ಹೋಗಿರುತ್ತಾನೋ ಆ ದಿಕ್ಕಿಗೆ ಕಷ್ಟ ನಷ್ಟಗಳು ಸಂಭವಿಸಲಿವೆ.  ಆದ್ದರಿಂದ ಇಂತಹ ಕಷ್ಟ ನಷ್ಟಗಳಿಂದ ನಮ್ಮನ್ನು ಕಾಪಾಡುವ ಜಗನ್ನಿಯಾಮಕ ದೇವರಲ್ಲಿ ಶರಣು ಹೋಗುವುದೇ ಸಜ್ಜನರ ಮಾರ್ಗವಾಗಿದೆ. ಇಂತಹ ಸಂವತ್ಸರ ಫಲವನ್ನು ಪ್ರತಿವರ್ಷ ಯುಗಾದಿ ದಿನ ಪಠಣ ಶ್ರವಣಗಳಿಂದ ಆಯಾಯ ಅಧಿಪತಿಗಳ (ಗ್ರಹರ) ಅನುಗ್ರಹ ಸಿದ್ದಿಸಲಿದೆ.  ಅಂತೆಯೇ ಕಷ್ಟಕೂಟಲೆಗಳಿಂದ ಪರಿಹಾರ ಸಿಗಲಿದೆಯಾದ್ದರಿಂದ ಧರ್ಮಾಭಿಮಾನಿಗಳು ಆಸ್ತಿಕ ಮಹನೀಯರು ಈ ಸಂವತ್ಸರ ದುರಿತ ನಿವಾರಣೆಗಾಗಿ ನಿರಂತರ ದೈವ ಭಕ್ತಿಯಿಂದ  ಧರ್ಮಾಚರಣೆ ಮಾಡಿ ಶುಭವನ್ನು ಕಾಣುವಂತಾಗಲೆಂದು ಪ್ರಾರ್ಥಿಸುತ್ತಾ ಈ ಸಂವತ್ಸರ ಫಲನಿರೂಪಣೆಯನ್ನು ಭಗವದರ್ಪಣೆ ಮಾಡುತ್ತಿದ್ದೇವೆ.